ಪುತ್ತೂರು, ಏಪ್ರಿಲ್ 4ನೇ 2017: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಡೆಸುವ ಅತ್ಯಂತ ಕ್ಲಿಷ್ಟಕರ ಸ್ಪರ್ಧಾತ್ಮಕ ಪರೀಕ್ಷೆಯಾದ ಕಿಶೋರ್ ವ್ಯಜ್ಞಾನಿಕ್ ಪ್ರೋತ್ಸಾಹ ಯೋಜನಾ(ಕೆವಿಪಿವೈ)2016ರ ರಾಷ್ಟ್ರಮಟ್ಟದ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಅರ್ಹತಾ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದಲ್ಲಿ ‘ಎಸ್‍ಬಿ’ ಕೆಟಗರಿಯಲ್ಲಿ, ಯಾವುದೇ ಕೋಚಿಂಗ್ ಸಹಾಯವಿಲ್ಲದೇ 29ನೇ ರ್ಯಾಂಕನ್ನು ಮುಡಿಗೇರಿಸಿಕೊಂಡು ಪುತ್ತೂರಿನ ವಿರಾಜ್ ಡೇನಿಯಲ್ ಡಿಸೋಜ ವಿಶಿಷ್ಟ ದಾಖಲೆಯನ್ನೇ ನಿರ್ಮಿಸಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯು ಪ್ರತೀವರ್ಷವೂ ಎಸ್ಎ, ಎಸ್ಎಕ್ಸ್ ಹಾಗೂ ಎಸ್‍ಬಿ ಎಂಬ ಮೂರು ವಿಭಾಗಗಳಲ್ಲಿ ಫೆಲೋಶಿಪ್‍ಗೆ ಮೂಲ ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡಲು ಇಚ್ಚೆಯಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಮೊದಲನೇ ಹಂತದಲ್ಲಿ ಆಪ್ಟಿಟ್ಯೂಡ್ ಟೆಸ್ಟ್ ಹಾಗೂ ಇದರಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಎರಡನೇ ಹಂತದಲ್ಲಿ ವಿಜ್ಞಾನ ವಿಷಯದ ಬಗ್ಗೆ 20 ನಿಮಿಷಗಳ ಸಂದರ್ಶನವನ್ನು ನಡೆಸುತ್ತದೆ. ಹೀಗೆ ಆಯ್ಕೆಗೊಂಡ ವಿದ್ಯಾರ್ಥಿಗಳು ಭಾರತೀಯ ವಿಜ್ಞಾನ ಸಂಸ್ಥೆ, ಐಐಎಸ್ಇಆರ್ ಮುಂತಾದ ಸಂಸ್ಥೆಗಳಲ್ಲಿ ಮೂಲ ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮುಂದುವರೆಸಲು ಅರ್ಹತೆಯನ್ನು ಗಿಟ್ಟಿಸಿಕೊಳ್ಳುತ್ತಾರೆ. ಕೆವಿಪಿವೈ ಅರ್ಹತಾ ಪರೀಕ್ಷೆಯಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪದವಿ ಹಂತದ ವಿದ್ಯಾಭ್ಯಾಸಕ್ಕೆ ವಾರ್ಷಿಕವಾಗಿ ರೂ.80,000 ಹಾಗೂ ಸ್ನಾತ್ತಕೋತ್ತರ ಪದವಿ ವ್ಯಾಸಂಗಕ್ಕೆ ವಾರ್ಷಿಕವಾಗಿ ರೂ.1,12,000 ಮೊತ್ತವನ್ನು ಫೆಲೋಶಿಪ್ ರೂಪದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು ನೀಡುತ್ತದೆ.

ಮೂಲತ: ಆರ್ಥಿಕವಾಗಿ ಬಡಕುಟುಂಬದಿಂದ ಬಂದಿರುವ ವಿರಾಜ್ ಪಠ್ಯ ಚಟುವಟಿಕೆಗಳಲ್ಲಿ ಬಹಳ ಮುಂದು. ಮಾರ್ಚ್ 2016ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೂಡ 98.17% ಅಂಕಗಳನ್ನು ಪಡೆದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದ ವಿರಾಜ್, ಕೆಇಎ ನಡೆಸಿದ ಸಿಇಟಿಯಲ್ಲಿ ಇಂಜಿನಿಯರಿಂಗ್‍ನಲ್ಲಿ 312, ಮೆಡಿಕಲ್‍ನಲ್ಲಿ 371, ಆಯುರ್ವೇದಿಕ್‍ನಲ್ಲಿ 145, ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 85 ನೇ ರ್ಯಾಂಕುಗಳನ್ನು ಗಳಿಸಿದ್ದರೂ, ಯಾವುದೇ ವೃತ್ತಪರ ಕೋರ್ಸುಗಳನ್ನು ಆಯ್ದುಕೊಳ್ಳದೇ, ಬಿಎಸ್ಸಿ ಪದವಿಗೆ ಪುತ್ತೂರಿನ ಸಂತ ಫಿಲೋಮಿನಾ ಪದವಿ ಕಾಲೇಜಿನಲ್ಲಿ ಮುಂದುವರಿಸುತ್ತಿದ್ದಾರೆ.

ಪುತ್ತೂರಿನ ಎಪಿಎಂಸಿ ರಸ್ತೆಯ ವಿಶಾಲ್ ವಿಹಾರ್ ನಿವಾಸಿಯಾಗಿರುವ ವಿನ್ಸೆಂಟ್ ಡಿಸೋಜ ಹಾಗೂ ಡಿಯಾಡ್ರಿ ಡಿಸೋಜಾ ದಂಪತಿಗಳ ಪುತ್ರನಾಗಿರುವ ವಿರಾಜ್ ಗೆ ಸೈಂಟಿಸ್ಟ್ ಆಗಬೇಕು ಎನ್ನುವ ಕನಸು.

ನನ್ನ ಮಗ ವಿದ್ಯಾಭ್ಯಾಸದಲ್ಲಿ ಪ್ರತಿಭಾವಂತ, ಆದರೆ ಅವನಿಗೆ ಅರ್ಹ ಸ್ಕಾಲರ್ಷಿಪ್‍ಗಳ ಸೂಕ್ತ ಮಾಹಿತಿಯ ಕೊರತೆ ಕಾಡುತ್ತಿತ್ತು. ಇಂತಹ ಸಂದರ್ಭದಲ್ಲಿ ಸ್ಕಾಲರ್ಷಿಪ್‍ಗಳ ಮಾಹಿತಿ ಪಡೆಯಲು ಪುತ್ತೂರಿನ ಕ್ರಸ್ಟ್ ಸೆಂಟರ್ ಫಾರ್ ರಿಸರ್ಚ್ & ಡೆವಲಪ್‍ಮೆಂಟ್‍ಗೆ ಹೋದಾಗ ಕೆವಿಪಿವೈ, ಇನ್ಸ್ಪೈರ್ ಹಾಗೂ ಇತರೇ ಸ್ಕಾಲರ್ಷಿಪ್‍ಗಳ ಬಗ್ಗೆ ಮಾಹಿತಿ ಲಭಿಸಿತು. ಈಗ ವಿರಾಜ್ ದೇಶಮಟ್ಟದಲ್ಲಿ 29ನೇ ರ್ಯಾಂಕು ಪಡೆದಿರುವುದು ತುಂಬಾ ಹೆಮ್ಮೆಯೆನಿಸುತ್ತಿದೆ. ಅವನ ವಿಜ್ಞಾನಿಯಾಗಬೇಕು ಎನ್ನುವ ಕನಸಿಗೆ ಹೆತ್ತವರಾಗಿ ನಮ್ಮ ಸಂಪೂರ್ಣ ಬೆಂಬಲ ಯಾವತ್ತೂ ಇರುತ್ತದೆ.

ವಿನ್ಸೆಂಟ್ ಡಿಸೋಜ, ವಿರಾಜ್ ಡೇನಿಯಲ್ ಡಿಸೋಜಾ ತಂದೆ

ಕೆವಿಪಿವೈ, ಇನ್ಸ್ಪೈರ್ ಅವಾರ್ಡ್, ಎಂಹೆಚ್ಆರ್‍ಡಿ ಗಳಂತಹ ಹಲವಾರು ದೊಡ್ಡ ಮೊತ್ತವನ್ನು ನೀಡುವ ಸ್ಕಾಲರ್ಷಿಪ್‍ಗಳು ಓದು ಮುಂದುವರಿಸಲು ಆಸಕ್ತಿಯಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತೇಜನವನ್ನು ನೀಡುತ್ತವೆ. ಆದರೆ ಅವುಗಳನ್ನು ಪಡೆದುಕೊಳ್ಳುವುದಕ್ಕೆ ಇರುವ ನಿರ್ದಿಷ್ಟ ಮಾನದಂಡ ಹಾಗೂ ಅರ್ಹತಾ ಪರೀಕ್ಷೆಗಳನ್ನು ಎದುರಿಸಲು ಹೆದರದೇ ಯಶಸ್ವಿಯಾಗಿರುವುದಕ್ಕೆ ವಿರಾಜ್ ಡೇನಿಯಲ್ ಡಿಸೋಜ ಉತ್ತಮ ಉದಾಹರಣೆ. ಯಾವುದೇ ಕೋಚಿಂಗ್ ಸಹಾಯವಿಲ್ಲದೇ ಸ್ವ-ಅಧ್ಯಯನದಿಂದ ರಾಷ್ಟ್ರಮಟ್ಟದ ರ್ಯಾಂಕು ಗಳಿಸಿರುವ ವಿರಾಜ್‍ಗೆ ಅಭಿನಂದನೆಗಳು.

ಶರತ್ ಆಳ್ವ ಕರಿಂಕ, ಮುಖ್ಯಸ್ಥರು, ಕ್ರಸ್ಟ್ ಸೆಂಟರ್ ಫಾರ್ ರಿಸರ್ಚ್ & ಡೆವಲಪ್‍ಮೆಂಟ್, ಪುತ್ತೂರು

Kishore Vyjnanic Protsah Yojana (KVPY) which is run by Indian Institute of Sciences declared the results of KVPY 2016. Viraj Daniel Dsouza, student of St. Philomena College, Puttur Secured 29th Rank in All India Level. Event hough Viraj Daniel Dsouza is hailing from a financially poor family background, he achieved a remarkable achievement in the national level. The noticeable point is that all these achievement is done purely based on his self study. Viraj never approached for the coaching classes for his achievement.